2028ಕ್ಕೆ ಹರೀಶ್ ಪೂಂಜಾ “ರಾಜಕೀಯ ಪರ್ವ” ಮುಗಿಯುತ್ತಾ..?
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜನಪ್ರಿಯ ಶಾಸಕ ಅನ್ನೋದರಲ್ಲಿ ಎರಡು ಮಾತಿಲ್ಲ.. ಅವರು ಜನಪ್ರಿಯ (ಶಾಸಕ ) ನಾಯಕ ಹೇಗಾದ್ರೂ, ಯಾವ ಅರ್ಥದಲ್ಲಿ ಅನ್ನೋದು ಕೂಡ ಸದ್ಯದ ಕಾಲಘಟ್ಟದಲ್ಲಿ ಮುಖ್ಯವಾಗುತ್ತೆ.
ಸುಮಾರು ಐದು ಬಾರಿ ಶಾಸಕರಾಗಿದ್ದ ದಿ. ವಸಂತ ಬಂಗೇರರನ್ನು ಸೋಲಿಸೋದು ಸುಲಭದ ಮಾತಗಿರಲಿಲ್ಲ, ಅಷ್ಟರ ಮಟ್ಟಿಗೆ ಬಂಗೇರರ ವರ್ಚಸ್ಸು ಬೆಳ್ತಂಗಡಿಯಲ್ಲಿ ಹಾಸುಹೊಕ್ಕಾಗಿತ್ತು, ಕಾಂಗ್ರೆಸಿಗರು ಪಕ್ಕಕ್ಕೆ ಇರಲಿ ಸ್ವತಃ ಬಿಜೆಪಿ ಕಾರ್ಯಕರ್ತರೇ ಬಂಗೇರರನ್ನು ಗೌರವದ ದೃಷ್ಟಿಯಲ್ಲಿ ನೋಡುತ್ತಿದ್ದರು, ಆದ್ರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ 22, 974 ಮತಗಳ ಅಂತರದಲ್ಲಿ ಸೋಲು ಕಾಣಬೇಕಾಯ್ತು.
ಅಂದಿನ ಮೋದಿ ಹವಾದ ಜೊತೆಗೆ, ಬಿಜೆಪಿ ಕಾರ್ಯಕರ್ತರ ಪಕ್ಷ ನಿಷ್ಠೆಯಿಂದಾಗಿ, ಯುವ ನಾಯಕ ಅನ್ನೋ ಉತ್ಸಾಹಕ್ಕೆ ಹರೀಶ್ ಪೂಂಜಾ ಗೆಲುವು ಸಾಧಿಸಿದ್ರು. ಈ ಗೆಲುವಿನ ಬಳಿಕ ಹಲವು ನಿರೀಕ್ಷೆ ಪೂಂಜಾ ಮೇಲಿತ್ತು! ಅಬ್ಬರದ ಭಾಷಣಗಳು ಪೂಂಜಾ ರಾಜಕೀಯ ಮುಖವನ್ನು ಬೇರೆ ರೀತಿಯಲ್ಲೇ ತೆರೆದಿಟ್ಟವು. ಕರಾವಳಿಯಲ್ಲಿ ಯಾವುದೇ ಕಮಲದ ನಾಯಕರು ಸದ್ದು ಮಾಡದಿದ್ರೂ, ಪೂಂಜಾ ಸದ್ದು ಕೇಳಿಸುತ್ತಿತ್ತು. ಅದ್ಯಾವುದೂ ಕೂಡ ಅಭಿವೃದ್ಧಿ ಪರದ ಸದ್ದುಗಳಾಗಿರಲಿಲ್ಲ ಬದಲಿಗೆ ದ್ವೇಷ ಭಾಷಣಕ್ಕೆ ಪೂರಕವಾಗಿತ್ತು.! ಒಬ್ಬ ನಾಯಕನಾಗಿ ಯಾವ ಮಾತುಗಳನ್ನು ಆಡಬಾರದೋ ಅಂತಹ ಮಾತುಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪ್ರತಿಧ್ವನಿಸಿದ್ದವು. ಇದರ ಹಿಂದಿನ ಉದ್ದೇಶ ಪ್ರಚಾರಕ್ಕೆ ಸೀಮಿತವೇ..? ಅಥವಾ ಒಂದಿಷ್ಟು ಕಾರ್ಯಕರ್ತರಲ್ಲಿ ನಾನು ಪ್ರಬಲ ಹಿಂದುತ್ವವಾದಿ ಅಂತ ತೋರಿಸುವುದೇ.? ಅಲ್ಲ ನಿಜವಾದ ಹಿಂದೂಪರ ಕಾಳಜಿಯೇ..? ಎಂಬುದು ವಿಮರ್ಶೆಗೆ ಒಳಪಡುತ್ತಲೇ ಬಂದಿವೆ. ಇವೆಲ್ಲವೂ ಪೂಂಜಾ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾದ್ರೂ ಅಚ್ಚರಿಯಿಲ್ಲ.
2023ರ ವಿಧಾನಸಭೆ ಚುನಾವಣೆಯಲ್ಲಿ ವಸಂತ್ ಬಂಗೇರ ಮರುಸ್ಪರ್ಧೆಗೆ ಇಳಿಯಲಿಲ್ಲ, ಆಗ ಬೆಳ್ತಂಗಡಿ “ಕೈ ” ಪಕ್ಷದಲ್ಲೇ ಹಲವು ಬಣಗಳಿದ್ದವು. ಬಂಗೇರರ ಸೀಟಿಗಾಗಿ ಹಲವರು ಕಣ್ಣಿಟ್ಟಿದ್ದರು, ಇವುಗಳ ನಡುವೆ ಬೆಂಗಳೂರಿನಿಂದ ಬಂದ ರಕ್ಷಿತ್ ಶಿವರಾಮ್ ಕಾಂಗ್ರೆಸ್ ನಿಂದ ಸೀಟ್ ಗಳಿಸುವಲ್ಲಿ ಯಶಸ್ವಿಯಾದ್ರು. ಆದ್ರೆ ಈ ಯಶಸ್ಸು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿರಲಿಲ್ಲ.. ಪೂಂಜಾ ವಿರುದ್ಧ 18, 216 ಮತಗಳ ಅಂತರದಲ್ಲಿ ಶಿವರಾಮ್ ಗೆ ಹಿನ್ನಡೆಯಾಯ್ತು.
2023ರಲ್ಲಿ ಒಂದು ವೇಳೆ ಬೆಳ್ತಂಗಡಿ ಕಾಂಗ್ರೆಸ್ ಪಾಳಯದಲ್ಲಿ ಬಣಗಳ ಕಿತ್ತಾಟವಿಲ್ಲವಾಗಿದ್ದಲ್ಲಿ ಹರೀಶ್ ಪೂಂಜಾ ಸೋಲು ನಿಶ್ಚಯವಾಗಿತ್ತು. ಅಂದಿನ ಗೆಲುವು ಕೂಡ ಭಾರಿ ಅಂತರದ ಗೆಲುವು ಆಗಿರಲಿಲ್ಲ.. ಸದ್ಯ ಪೂಂಜಾ ರಾಜಕೀಯ ಪರ್ವ ನಿರ್ಣಯಕ ಹಂತಕ್ಕೆ ಬಂದು ತಲುಪಿದೆ ಅಂದ್ರೂ ತಪ್ಪಲ್ಲ.
ಇಂದಿನ ರಾಜಕೀಯ ದೃಷ್ಟಿಕೋನವು ಬದಲಾಗಿದೆ ಕೇವಲ ಮೋದಿ ಹವಾ ಇದ್ದರೂ ಸಾಲುವುದಿಲ್ಲ. ಕೇಸರಿ ಪಕ್ಷದೊಳಗೂ ಒಂದಿಷ್ಟು ಬೆಳವಣಿಗೆಗಳು ಆಗಿವೆ. ಬಿಜೆಪಿ ಹಾಗೂ ಕೇಸರಿ ಶಾಲಿನ ಅಡಿಯಲ್ಲೇ ಹೊಸ ನಾಯಕರ ಓಡಾಟ ಶುರುವಾಗಿದೆ. ಅದ್ರಲ್ಲಿ 40ರ ಆಸುಪಾಸಿನ ಪ್ರಬಲ ಸಮುದಾಯದ ಕಿರಣ್ ಗೌಡ ಎಂಬ ಹೆಸರು ಬೆಳ್ತಂಗಡಿಯಲ್ಲಿ ಚಾಲ್ತಿಯಲ್ಲಿದೆ. ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸುವ ಆದ್ರೆ ಅಧಿಕಾರ ಪಡೆಯುವಲ್ಲಿ ಹಿಂದೆ ಉಳಿಯುತ್ತಿರೋ ಬಿಲ್ಲವ ಸಮುದಾಯದ ನಾಯಕರು ಬೆಳ್ತಂಗಡಿ ಬಿಜೆಪಿಯಲ್ಲಿ ಹೊಸ ಸವಾಲು ಎಸೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇದರಿಂದ, ಹರೀಶ್ ಪೂಂಜಾ ರಾಜಕೀಯ ದಾರಿ ಭವಿಷ್ಯದಲ್ಲಿ ಸುಲಭವಿಲ್ಲ ಎಂಬ ವಿಚಾರ ರಾಜಕೀಯ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇತ್ತೀಚಿಗೆ ಬೆಳ್ತಂಗಡಿ ಸುತ್ತಮುತ್ತ ನಡೆದ ಹಿಂದೂ ಸಂಗಮವು ಸಕ್ಸಸ್ ಎಂದು ಹೇಳೋದಕ್ಕೆ ಬರುವುದಿಲ್ಲ. ಯಾಕಂದ್ರೆ, ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಯಾವುದೇ ಹಿಂದೂ ಸಂಗಮವಾಗಿಲ್ಲ! ಆಕೆಯ ನ್ಯಾಯದ ಪರ ಯಾತಕ್ಕಾಗಿ ಹಿಂದೂ ಸಂಗಮವಾಗಿಲ್ಲ ಅನ್ನೋದು ಬೆಳ್ತಂಗಡಿ ಕ್ಷೇತ್ರದಲ್ಲಿರೋ ಯಕ್ಷಪ್ರಶ್ನೆ.. ಈ ಪ್ರಶ್ನೆ ಹಾಗೂ ಸವಾಲುಗಳು ಹರೀಶ್ ಪೂಂಜಾ ರಾಜಕೀಯ ಭವಿಷ್ಯದಲ್ಲೂ ಸದ್ದು ಮಾಡುವ ಅಂಶಗಳಾಗಿವೆ.
Kannada 














